ಮಾವು ನೈಸರ್ಗಿಕವಾಗಿ ಹಣ್ಣಾಗಿದೆಯೇ ಅಥವಾ ರಾಸಾಯನಿಕ ಬಳಸಲಾಗಿದೆಯೇ? ಈ ರೀತಿ ಕಂಡುಕೊಳ್ಳಿ

ಮಾವು ನೈಸರ್ಗಿಕವಾಗಿ ಹಣ್ಣಾಗಿದೆಯೇ ಅಥವಾ ರಾಸಾಯನಿಕ ಬಳಸಲಾಗಿದೆಯೇ? ಈ ರೀತಿ ಕಂಡುಕೊಳ್ಳಿ

Oneindia

Oneindia

59m

Loading...

ಬೇಸಿಗೆ ಬಂತೆಂದರೆ ಸಾಕು ಮಾರುಕಟ್ಟೆಯಲ್ಲಿ ರಾಶಿ ರಾಶಿ ಮಾವಿನಹಣ್ಣುಗಳು ತುಂಬಿಕೊಂಡಿರುತ್ತವೆ. ಮಾವಿನ ಹಣ್ಣನ್ನು ಇಷ್ಟಪಡದವರು ಬಹಳ ವಿರಳ. ಮಾವಿನ ಹಣ್ಣನ್ನು ಬಳಸಿ ವಿವಿಧ ರೀತಿಯ ಖಾದ್ಯಗಳಲ್ಲಿ ಬಳಸಬಹುದಾಗಿದೆ. ಹಾಗಾಗಿ ಮಾವಿನಹಣ್ಣುಗಳಿಗೆ ಬೇಡಿಕೆಯೂ ಜಾಸ್ತಿಯಾಗಿದೆ.

ಆದರೆ ಮಾರುಕಟ್ಟೆಯಲ್ಲಿರುವ ಎಲ್ಲಾ ಮಾವಿನ ಹಣ್ಣುಗಳು ನೈಸರ್ಗಿಕವಾಗಿ ಹಣ್ಣಾಗಿರುವುದಿಲ್ಲ. ಅದನ್ನು ಕ್ಯಾಲ್ಸಿಯಂ ಕಾರ್ಬೈಡ್ ಮತ್ತು ಆರ್ಸೆನಿಕ್ ನಂತಹ ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಲಾಗುತ್ತದೆ. ಹಾನಿಕಾರಕ ರಾಸಾಯನಿಕಗಳ ಬಳಕೆಯ ವಿರುದ್ಧ FSSAI ಪದೇ ಪದೇ ಎಚ್ಚರಿಕೆ ನೀಡುತ್ತಲೇ ಇದೆ.

ಕೃತಕವಾಗಿ ಮಾಗಿದ ಮಾವಿನ ಹಣ್ಣು ಆರೋಗ್ಯಕ್ಕೆ ಹಾನಿಕಾರಕ:

ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಮಾವು ಹಣ್ಣಾಗುವ ಪ್ರಕ್ರಿಯೆಯನ್ನು ವೇಗಗೊಳಿಸಲು ಬಳಸಲಾಗುತ್ತದೆ. ಇದು ಅಸಿಟಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ.ಇದು ಮಾವು ಮಾಗುವಂತೆ ಮಾಡುತ್ತದೆ. ಆಹಾರ ಸುರಕ್ಷತಾ ತಜ್ಞರ ಪ್ರಕಾರ, ಇಂತಹ ಹಣ್ಣುಗಳನ್ನು ಸೇವಿಸುವುದರಿಂದ ತಲೆನೋವು, ತಲೆ ಸುತ್ತುವುದು ಅಥವಾ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಹಣ್ಣನ್ನು ಕೃತಕವಾಗಿ ಮಾಗಿಸಲಾಗಿದೆಯೇ ಕಂಡುಕೊಳ್ಳುವುದು ಹೇಗೆ?:

ಬಣ್ಣದ ಮೂಲಕ:

ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ಸಾಮಾನ್ಯವಾಗಿ ಬಣ್ಣಗಳ ಮಿಶ್ರಣವನ್ನು ಹೊಂದಿರುತ್ತವೆ. ಹಸಿರು, ಹಳದಿ ಮತ್ತು ಕೆಲವೊಮ್ಮೆ ವೈವಿಧ್ಯತೆಯನ್ನು ಅವಲಂಬಿಸಿ ಸ್ವಲ್ಪ ಕೆಂಪು ಬಣ್ಣ ಕೂಡಾ ಇರುತ್ತದೆ. ಪೂರ್ತಿ ಹಣ್ಣು ಏಕರೂಪದ ಬಣ್ಣವನ್ನು ಹೊಂದುವುದು ವಿರಾಳಾತಿ ವಿರಳ.

ಮತ್ತೊಂದೆಡೆ, ರಾಸಾಯನಿಕವಾಗಿ ಮಾಗಿದ ಮಾವಿನ ಹಣ್ಣುಗಳು ಹೆಚ್ಚಾಗಿ ಅತಿಯಾಗಿ ಹಳದಿಯಾಗಿರುತ್ತದೆ. ಅದರಲ್ಲಿಯೂ ಇಡೀ ಹಣ್ಣು ಒಂದೇ ರೀತಿಯ ಬಣ್ಣವನ್ನು ಹೊಂದಿರುತ್ತದೆ. ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುವ ಎಲ್ಲಾ ಮಾವು ಏಕರೂಪದ ಬಣ್ಣದಲ್ಲಿ ಕಂಡುಬಂದರೆ, ಅದು ಖಂಡಿತವಾಗಿಯೂ ರಾಸಾಯನಿಕ ಬಳಸಿಯೇ ಮಾಗಿಸಿರುವಂಥದ್ದು.

ಫ್ರೂಟ್ ಸಲಾಡ್ ಮಾಡುವ ಮುನ್ನ ತಿಳಿದುಕೊಳ್ಳಿ: ಈ ಹಣ್ಣುಗಳ ಕಾಂಬಿನೇಷನ್ ಅಪಾಯಕಾರಿ

ಮಾವಿನ ಸುವಾಸನೆ:

ನೈಸರ್ಗಿಕವಾಗಿ ಮಾಗಿದ ಮಾವನ್ನು ಗುರುತಿಸಲು ಸುಲಭವಾದ ಮಾರ್ಗವೆಂದರೆ ಅದರ ಸುವಾಸನೆ. ಮಾಗಿದ ಮಾವಿನ ಕಾಂಡದ ಬಳಿ ಸಿಹಿ ಹಣ್ಣಿನಂತಹ ವಾಸನೆ ಇರಬೇಕು. ರಾಸಾಯನಿಕವಾಗಿ ಮಾಗಿದ ಮಾವಿನ ಹಣ್ಣುಗಳು ಸಾಮಾನ್ಯವಾಗಿ ಕಡಿಮೆ ಸುವಾಸನೆ ಹೊಂದಿರುತ್ತದೆ ಅಥವಾ ಯಾವುದೇ ರೀತಿಯ ಪರಿಮಳ ಬೀರುವುದೇ ಇಲ್ಲ. ಮಾವು ಪೂರ್ತಿಯಾಗಿ ಹಣ್ಣಾಗಿದ್ದರೂ ಅದರಲ್ಲಿ ಒಂದು ಚೂರೂ ಪರಿಮಳ ಇಲ್ಲ ಎಂದಾದರೆ ಅದು ಎಚ್ಚರಿಕೆಯ ಗಂಟೆಯೇ.

ವಿನ್ಯಾಸ ಮತ್ತು ದೃಢತೆ:

ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ನಿಧಾನವಾಗಿ ಒತ್ತಿದಾಗ ಸ್ವಲ್ಪ ಮೃದುವಾಗಿರುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ರಾಸಾಯನಿಕವಾಗಿ ಮಾಗಿದ ಮಾವಿನ ಹಣ್ಣುಗಳು ಹೊರಭಾಗದಲ್ಲಿ ಮೃದುವಾಗಿರಬಹುದು ಆದರೆ ಒಳಗೆ ಗಟ್ಟಿಯಾಗಿರುತ್ತವೆ. ಕೆಲವು ತುಂಬಾ ಮೃದುವಾದ ತೇಪೆಗಳನ್ನು ಕೂಡಾ ಹೊಂದಿರಬಹುದು. ಆದರೆ ಇತರ ಭಾಗಗಳು ಗಟ್ಟಿಯಾಗಿಯೇ ಇರುವುದು.

ಬಾಳೆಹಣ್ಣು vs ಖರ್ಜೂರ: ಬೇಸಿಗೆಯಲ್ಲಿ ಯಾವುದು ನಿಮ್ಮ ದೇಹಕ್ಕೆ ಹೆಚ್ಚು ಉತ್ತಮ?

ಮಾವಿನ ಮೇಲೆ ಕಾಣಿಸಿಕೊಳ್ಳುವ ಪುಡಿ:

ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಮಾಗಿಸಿದ ಮಾವಿನ ಹಣ್ಣುಗಳ ಮೇಲ್ಮೈಯಲ್ಲಿ ಬೂದು ಅಥವಾ ಬಿಳಿ ಬಣ್ಣದ ಪುಡಿ ಉಳಿಯುತ್ತದೆ. ಇದು ರಾಸಾಯನಿಕ ಬಳಕೆಯ ಸಂಕೇತವಾಗಿರಬಹುದು. ಹಾಗಾಗಿ ಮಾವು ತಿನ್ನುವ ಮೊದಲು ಯಾವಾಗಲೂ ಚೆನ್ನಾಗಿ ತೊಳೆಯಿರಿ. ಹಣ್ಣಿನ ಮೇಲೆ ಅಸಾಮಾನ್ಯ ಪುಡಿ ಕಂಡುಬಂದರೆ ಆ ಹಣ್ಣನ್ನು ತಿನ್ನದಿರುವುದೇ ಸೂಕ್ತ.

ಹಣ್ಣಿನ ಒಳಭಾಗವನ್ನು ಪರಿಶೀಲಿಸಿ:

ನೀವು ಮಾವನ್ನು ಕತ್ತರಿಸಿದಾಗ, ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ಒಳಗೆ ಏಕರೂಪದ ಹಳದಿ ಅಥವಾ ಕಿತ್ತಳೆ ಬಣ್ಣವನ್ನು ಹೊಂದಿರುತ್ತವೆ. ರಾಸಾಯನಿಕವಾಗಿ ಮಾಗಿದ ಮಾವಿನ ಹಣ್ಣುಗಳು ಹಾಗಿರುವುದಿಲ್ಲ. ಅಲ್ಲಲ್ಲಿ ಗಟ್ಟಿಯಾಗಿರುತ್ತವೆ. ರುಚಿಯೂ ಇರುವುದಿಲ್ಲ.

ನೀರಿನ ಪರೀಕ್ಷೆ:

ಮಾವಿನ ಹಣ್ಣನ್ನು ನೀರು ತುಂಬಿರುವ ಪಾತ್ರೆಯಲ್ಲಿ ಹಾಕಬೇಕು. ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ಸಾಮಾನ್ಯವಾಗಿ ಮುಳುಗುತ್ತವೆ. ಆದರೆ ಕೃತಕವಾಗಿ ಮಾಗಿದ ಹಣ್ಣುಗಳು ಆಂತರಿಕ ಬದಲಾವಣೆಗಳಿಂದಾಗಿ ತೇಲಬಹುದು.

ಸುರಕ್ಷಿತ ಮತ್ತು ಆರೋಗ್ಯಕರ ಮಾವಿನ ಹಣ್ಣುಗಳನ್ನು ಆರಿಸಿ:

ಸಾಧ್ಯವಾದಾಗಲೆಲ್ಲಾ, ವಿಶ್ವಾಸಾರ್ಹ ಮಾರಾಟಗಾರರಿಂದ ಮಾವಿನ ಹಣ್ಣುಗಳನ್ನು ಖರೀದಿಸಿ. ಅಥವಾ ಸಾವಯವ ಉತ್ಪನ್ನಗಳನ್ನು ಆರಿಸಿಕೊಳ್ಳಿ. ಕಾಲೋಚಿತ, ಸ್ಥಳೀಯ ಮೂಲದ ಹಣ್ಣುಗಳು ನೈಸರ್ಗಿಕವಾಗಿ ಹಣ್ಣಾಗಿರುವ ಸಾಧ್ಯತೆ ಹೆಚ್ಚು.

(ಬರಹ: ರಂಜಿತಾ ಆರ್.ಕೆ.)

Shiddalingesh S Oneindia

source: oneindia.com

Dailyhunt
Disclaimer: This content has not been generated, created or edited by Dailyhunt. Publisher: OneIndia Kannada