Vijay: ಕೊನೆಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿ ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಅವರು ಶನಿವಾರ 11ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಜಯ್ ಅವರ ಟಿವಿಕೆ ಪಕ್ಷಕ್ಕೆ ವಿವಿಧ ಪಕ್ಷಗಳ ನಾಯಕರು ಬೆಂಬಲ ಕೊಟ್ಟಿದ್ದಾರೆ. ವಿಜಯ್ ಅವರು ಅಧಿಕಾರಕ್ಕೆ ಬರುವುದಕ್ಕೆ ಮುಖ್ಯವಾಗಿ ಹಾಗೂ ಪರೋಕ್ಷವಾಗಿ ಡಿಎಂಕೆ ಪಕ್ಷವೇ ಕಾರಣವಾಗಿದೆ.
ತಮಿಳುನಾಡಿನಲ್ಲಿ ಕಳೆದ ಮೂರು ದಿನಗಳಿಂದಲೂ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಕ್ಕೆ ಬ್ರೇಕ್ ಬಿದ್ದಿದೆ. ತಮಿಳುನಾಡಿ ವಿಧಾನಸಭೆ ಸ್ಥಾನಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ಅವರು ಕೊನೆಗೂ ಯಶಸ್ವಿಯಾಗಿದ್ದಾರೆ. ಬಹುಮತ ಸಾಬೀತುಪಡಿಸಲು ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ 118 ಶಾಸಕರ ಬೆಂಬಲ ಬೇಕಾಗಿತ್ತು. ಆದರೆ 108 ಸ್ಥಾನಗಳಲ್ಲಿ ಟಿವಿಕೆ ಗೆಲುವು ಸಾಧಿಸಿದ್ದು, ಬಹುಮತಕ್ಕೆ 10 ಶಾಸಕರ ಕೊರತೆ ಇತ್ತು. ಟಿವಿಕೆಗೆ ಇದೀಗ 121 ಶಾಸಕರ ಬೆಂಬಲ ಸಿಕ್ಕಂತಾಗಿದೆ.
121 ಶಾಸಕರ ಬೆಂಬಲ ಪತ್ರಗಳೊಂದಿಗೆ ವಿಜಯ್ ಅವರು ಶುಕ್ರವಾರ ಸಂಜೆ ತಮಿಳುನಾಡು ರಾಜ್ಯಪಾಲರಾದ ಆರ್.ವಿ. ಅರ್ಲೇಕರ್ ಅವರನ್ನು ಭೇಟಿ ಮಾಡಿದರು. ಬೆಂಬಲ ಪತ್ರಗಳನ್ನು ಹಸ್ತಾಂತರಿಸಿದ ಮೇಲೆ ರಾಜ್ಯಪಾಲರು ನೂತನ ಸರ್ಕಾರ ರಚನೆಗೆ ಸಮ್ಮತಿ ಕೊಟ್ಟಿದ್ದಾರೆ. ಅಂತಿಮವಾಗಿ ಶನಿವಾರ ಬೆಳಿಗ್ಗೆ 11 ಗಂಟೆಗೆ ನಟ ಹಾಗೂ ಟಿವಿಕೆ ಮುಖ್ಯಸ್ಥ ಜೋಸೆಫ್ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ ಇದಕ್ಕೆ ಪರೋಕ್ಷವಾಗಿ ಡಿಎಂಕೆ ಪಕ್ಷವೇ ಕಾರಣವಾಗಿರುವುದು ವಿಶೇಷ.
| ಪಕ್ಷದ ಹೆಸರು | ಬೆಂಬಲಿಸಿದ ಶಾಸಕರ ಸಂಖ್ಯೆ |
|---|---|
| ಟಿವಿಕೆ (TVK) | 108 |
| ಕಾಂಗ್ರೆಸ್ | 5 |
| ವಿಸಿಕೆ (VCK) | 2 |
| ಸಿಪಿಐ (CPI) | 2 |
| ಸಿಪಿಐ (ಎಂ) [CPM] | 2 |
| ಐಯುಎಂಎಲ್ (IUML) | 2 |
| ಒಟ್ಟು ಬೆಂಬಲ | 121 |
ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾ
ತಮಿಳುನಾಡಿನಲ್ಲಿ ಕಳೆದ ಮೂರು ದಿನಗಳಿಂದಲೂ ಹಲವು ರಾಜಕೀಯ ಹೈಡ್ರಾಮಾ ನಡೆದಿತ್ತು. ಇದೀಗ ಅಂತಿಮವಾಗಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬಹುಮತ ಸಿಕ್ಕಿದೆ. ಟಿವಿಕೆ ಪಕ್ಷವು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಕಾಂಗ್ರೆಸ್ ಮತ್ತು ವಿವಿಧ ಎಡಪಕ್ಷಗಳ ಬೆಂಬಲ ಸೇರಿ ಒಟ್ಟು ಶಾಸಕರ ಸಂಖ್ಯೆ 121 ಆಗಿದೆ. ತಮಿಳುನಾಡು ವಿಧಾನಸಭೆಯ ಮ್ಯಾಜಿಕ್ ನಂಬರ್ ಸಂಖ್ಯೆ 118 ಆಗಿದೆ. ಅಂತಿಮವಾಗಿ ಮೇ 9ರ ಬೆಳಿಗ್ಗೆ 11 ಗಂಟೆಗೆ ತಮಿಳುನಾಡಿನ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ವಿಜಯ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಡಿಎಂಕೆ ಪಕ್ಷ ಪರೋಕ್ಷ ಬೆಂಬಲವೇ ಕಾರಣ
ಇನ್ನು ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಪರೋಕ್ಷವಾಡಿ ಡಿಎಂಕೆ ಪಕ್ಷದ ಸಹಕಾರವೇ ಕಾರಣವಾಗಿದೆ. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದವು.
ಟಿವಿಕೆಗೆ ಬಹುಮತ ಕೊರತೆ ಎದುರಾದ ಸಂದರ್ಭದಲ್ಲಿ ಡಿಎಂಕೆ ಪಕ್ಷದ ಮುಖ್ಯಸ್ಥ ಹಾಗೂ ತಮಿಳುನಾಡಿನ ಮಾಜಿ ಸಿಎಂ ಎಂ.ಕೆ ಸ್ಟಾಲಿನ್ ಅವರು ನಮ್ಮ ಮಿತ್ರ ಪಕ್ಷಗಳು ಟಿವಿಕೆಗೆ ಬೆಂಬಲ ಕೊಟ್ಟರೆ ಆಕ್ಷೇಪವಿಲ್ಲ ಎಂದು ಹೇಳಿದ್ದರು. ಇದಾದ ನಂತರ ನಡೆದ ಬೆಳವಣಿಗೆಯಲ್ಲಿ ಎಡಪಕ್ಷಗಳು, ವಿಸಿಕೆ ಹಾಗೂ ಮುಸ್ಲಿಂ ಲೀಗ್ ಪಕ್ಷಗಳು ವಿಜಯ್‌ಗೆ ಬೆಂಬಲ ಸೂಚಿಸಿವೆ.
Hitesh Y Oneindiasource: oneindia.com

